Tuesday, April 13, 2010

ನಮ್ಮೂರು


ಮೂಡಣಕ್ಕೆ ಮುಖ ಮಾಡಿ ನಿಂತ ಮನೆಗಳು 
ಬೆರಳೆಣಿಕೆಯ ಸಂಸಾರಗಳು 
ಪ್ರತಿ ಮನೆಯಲ್ಲೂ ಪುಟ್ಟ ಪುಟ್ಟ ಮಕ್ಕಳು   

ಮುಂಭಾಗದಲ್ಲಿ ಹರಡಿದೆ ಅಡಿಕೆ ತೋಟ 
ಹಿಂಭಾಗದಲ್ಲಿ ದಟ್ಟವಾದ ಕಾಡು 
ಊರ ಹೊರಗಿನ ಎರಡು ಕೆರೆಗಳು 

ಊರ ಮಧ್ಯದಲ್ಲಿದ್ದಾನೆ ನಮ್ಮ ಗಣಪ 
ತೋಟದಲ್ಲಿದ್ದು ಕಾಯುತ್ತಾನೆ ನಾಗಪ್ಪ 
ಅಲ್ಲಿಯೇ ಇದ್ದಾಳೆ ನಮ್ಮವ್ವ ಚೌಡಿ 

ಬಗೆ ಬಗೆಯ ಮಾವಿನ ಗಿಡಗಳು 
ವಿದವಿಧದ ಹಣ್ಣುಗಳು 
ತರತರಹದ ಔಷಧಿ ಗಿಡಗಳು 

ದೂರದಲ್ಲಿರುವ  ನಮ್ಮ ನೆಚ್ಚಿನ ಶಾಲೆ 
ದಾರಿಯಲ್ಲಿ ಸಿಗುವ ನೀರಿನ ಬುಗ್ಗೆಗಳು 
ಎದುರಲ್ಲಿ ಆಗುವ ಕಬ್ಬಿನ ಆಲೆಮನೆ 

ಅಡಿಕೆ ಒಣಗಿಸಲಿರುವ ಚಾಲಿಕಣ
ಆಗಿದೆ ಅದು ನಮ್ಮ ಆಟದ ಮೈದಾನ 
ಅಲ್ಲಿ ಮಲಗುವುದೆಂದರೆ ನಮಗೆ ಔತಣ 

ಸುಪ್ರಭಾತ ಹಾಡುವ ಹಕ್ಕಿಗಳು 
ನಾಟ್ಯ ಮಾಡುವ ನವಿಲುಗಳು 
ಆಟ ಆಡುವ ಮೊಲ ಅಳಿಲುಗಳು 

ಮನಸಿಗೆ ಮುದ ನೀಡುವ ಸೂರ್ಯಾಸ್ತ 
ವಿಶಾಲವಾದ ಭತ್ತದ ಗದ್ದೆಗಳು 
ನೀರಾವರಿಗೆ ನೆರವಾಗುವ ಹೊಳೆ 

ವರ್ಣಿಸಲು ಸಾಲದು ಶಬ್ದಗಳು 
ಇವು ನಮ್ಮೂರಿನ ಸಂಗತಿಗಳು 
ಹೆಮ್ಮೆಯಾಗುತ್ತದೆ ಇದನ್ನು ಹೇಳಲು 

Saturday, April 10, 2010

ನಮ್ಮ ವಿದ್ಯಾಲಯ


ನಮ್ಮ ವಿದ್ಯಾಲಯ 

ಬಂದರೆ ವಿಚಿತ್ರವೆನಿಸುವ ವಾತಾವರಣ 
ಮಸಣದತ್ತ ಬಹುಮಂದಿ ನಡೆಸಿದರು ಪಯಣ 
ತಿಳಿಯದು ಯಾವುದು ಮೂಡಣ ಪಡುವಣ 

ಹೊತ್ತಿಗೆಗಳೇ ಇಲ್ಲದ ಗ್ರಂಥಾಲಯ 
ಅವ್ಯವಸ್ಥಿತ ಪ್ರಯೋಗಾಲಯ 
ಎಲ್ಲವೂ ಇದೆ ಎಂದು ಬೊಗಳುವ ಮಹಾಶಯ 

ಅನುಭವವಿದ್ದರೂ ಸುಜ್ಞಾನವಿಲ್ಲದ ಶಿಕ್ಷಕರು 
ಮಕ್ಕಳನ್ನು ಖೈದಿಗಳಂತೆ ಕಾಣುವ ನೀಚರು 
ಲಂಚದಿಂದಲೇ ದಿನ ಆರಂಭಿಸುವ ಆಡಳಿತ ವಿಭಾಗ 

ಬುಧಿವಂತಿಕೆಗೆ ಬೆಲೆಸಿಗದಿರುವ ಗುರುವ್ರಂದ
ನಿಷ್ಠೆಯಿಂದ ದುಡಿಯುವ ಕಾರ್ಮಿಕರು 
ವಿದ್ಯಾರ್ಥಿಗಳ ಗೆಳೆಯರಾಗಿರುವ ಸಿಬ್ಬಂದಿಗಳು 

ಎಲ್ಲ ಖರ್ಚನ್ನೂ ಭರಿಸುವ ವಿದ್ಯಾರ್ಥಿಗಳು 
ಗೋಸುಂಬೆಗಳನ್ತಿರುವ ಮುಖ್ಯಸ್ಥರು 
ಕಲಾವಿದರ ಗೌರವಿಸದ ಮೂಢರು 

ಶಿಸ್ತಿನ ಹೆಸರಲ್ಲಿ ಶಿಕ್ಷಿಸುವ ಶೋಷಕರು 
ಹಗೆ ಸಾಧಿಸುವ ಬಲಾತ್ಕಾರಿಗಳು 
ಮದ ತುಂಬಿದ ಮಂದರು 

ಸ್ವಂತ ಬುದ್ಧಿಯಿಲ್ಲದ ಅವಲಂಬಿಗಳು 
ಏಕತೆಯಿಲ್ಲದ ವಿಭಾಗಗಳು 
ಹಣ ಮಾಡಲು ನಡೆಸುವ ಬಗೆಬಗೆಯ ಕಾರ್ಯಕ್ರಮಗಳು 

ಇದು ಮುಗಿಯದ ಕಥೆ 
ಬರೆಬರೆದು ನಾ ಸೋತೆ 
ಹೀಗಿದೆ ನಮ್ಮ ವಿದ್ಯಾಲಯದ ವ್ಯಥೆ 

Tuesday, April 6, 2010

ಕನಸಿನ ಕನ್ಯೆ



ನೀಳ ಜಡೆಯ ನಲ್ಲೆ
ಅವಳ ಪ್ರತಿ ನಡೆಯ ನಾ ಬಲ್ಲೆ
ವರ್ಣಿಸಲು ಕಷ್ಟವಾದ ಶಿಲ್ಪಕಲೆ

ಹಣೆಯು ಚಂದಿರನಂತೆ ಸುಂದರ
ಮೂಗು ಕಾಂತಿಯ ಅಂಕುರ
ಕೆನ್ನೆಯ ಮೇಲೆ ನಗುವಿನ ಉಂಗುರ

ಮನಸೆಳೆವ ಕಣ್ಣುಗಳು
ಮುತ್ತುದುರಿಸುವ ತುಟಿಗಳು
ಗುಲಾಬಿ  ದಳದಂತಹ ಕಿವಿಗಳು

ಮೊದಲ ನೋಟದಲ್ಲೇ ಮನಸೋತೆ ಅವಳಿಗೆ
ನೆನಪಾದಳು ಪ್ರತಿ ಗಳಿಗೆಗೆ
ನಾನೊಬ್ಬನೇ ಬಿದ್ದಿರಲಿಲ್ಲ ಅವಳ ಮೋಡಿಗೆ

ಶರಣಾದ ಗಿಡಗಳು ಬೀಸಿದವು ಗಾಳಿ
ನೋಡಲು ಓಡೋಡಿ ಬಂತು ಮಿಂಚು
ಸ್ಪರ್ಶಿಸಲು ಹಾತೊರೆದು ಧರೆಗಿಳಿದ ಮಳೆರಾಯ

ನಾಟ್ಯವಾಡಿದವು ಜಿಂಕೆಗಳು
ಸಂತಸದ ಹಾಡನ್ನು ಹಾಡಿದವು ಪಕ್ಷಿಗಳು
ಅಂಬಾರಿಯ ಹೊರಲು ಸಿದ್ಧನಾದ ಗಜರಾಜ

ಹೀಗಿರಲು ಮುಟ್ಟಿದ ಸೂರ್ಯದೇವ
ಕೇಳಿತು ಅಮ್ಮನ ಸುಪ್ರಭಾತ
ಎದ್ದು ಕುಳಿತೆ ಮರುಗಿ ನನಸಾಗಿದ್ದರೆ ಎಂದು

Monday, April 5, 2010

ನಗು


ಮಗುವಿನ ಮುಗ್ಧ ನಗು 
ಕುಮಾರನ ಸ್ಫಟಿಕದ ನಗು 
ಕಿಶೋರನ ಹುಡುಗಾಟದ ನಗು 

ತಂದೆ ತಾಯಿಯ ಮಮತೆಯ ನಗು 
ನೆರೆಹೊರೆಯವರ ಕಾಳಜಿಯ ನಗು 
ಅಜ್ಜ ಅಜ್ಜಿಯ ಪ್ರೀತಿಯ ನಗು 

ಯುವತಿಗೆ ಮನಸೋತ ಯುವಕನ ಮುಗುಳ್ನಗು 
ಕನ್ಯೆಯ ಚೆಲುವಿನ ಗರ್ವದ ನಗು 
ಮದುಮಕ್ಕಳ ನಾಚಿಕೆಯ ನಗು 

ದಿಗ್ವಿಜಯಿಯ ಹೆಮ್ಮೆಯ ನಗು 
ಸೋಲಲ್ಲೂ ಜಯಕಂಡ ಕ್ರೀಡೆಯ ನಗು 
ದೇಶಪ್ರೇಮಿ ಯೋಧನ ಸಾರ್ಥಕತೆಯ ನಗು 

ರಾಜಕಾರಣಿಯ ಸುಳ್ಳು ಭರವಸೆಯ ನಗು 
ಮುಗ್ಧ ಜನರ ನಿರೀಕ್ಷೆಯ ನಗು 
ಕಳ್ಳ ಅಧಿಕಾರಿಯ ಕ್ರತಕ ನಗು 

ಮೋಸಗಾರನ ಮೋಹದ ನಗು 
ಜಿಪುಣನ ಲೋಭದ ನಗು 
ನಾಶಕ್ಕೆ ಮೂಲ ಈ ನಗು 

ಮನುಜನ ಒಂದು ಸಂಪತ್ತು  ನಗು
ಸಂಬಂಧಗಳ ಬೆಳವಣಿಗೆಗೆ ಕಾರಣ ನಗು 
ಏಳಿಗೆಯ ಬುನಾದಿ ನಗು  

ಅಮ್ಮ


ಭೂಮಿಗೆ ಕರೆತಂದವಳು
ನೋಡಿದಾಗ ಮೊದಲು ಕಂಡವಳು
ಮೊದಲ ಮಾತಾದವಳು ಅಮ್ಮ

ಮೊದಲ ಗುರುವಾದವಳು
ಪೆಟ್ಟು ನೀಡಿ ಬುದ್ಧಿ ಹೇಳಿದವಳು
ಪ್ರತಿಕ್ಷಣವೂ ನಗುವಂತೆ ಮಾಡಿದವಳು ಅಮ್ಮ

ಬಿದ್ದಾಗ ಎತ್ತಿದವಳು
ಅತ್ತಾಗ ರಮಿಸಿದವಳು
ಕಥೆ ಹೇಳಿ ಮಲಗಿಸಿದವಳು ಅಮ್ಮ

ಮನೆಗಾಗಿ ದುಡಿದವಳು
ಪರರ ಸೇವೆ ಮಾಡಿದವಳು
ವಿಶ್ರಾಂತಿಯ ಕಾಣದವಳು ಅಮ್ಮ

ಪತಿಯ ಸಾರಥಿಯಾದವಳು
ಮಕ್ಕಳ ಏಳಿಗೆಗೆ ಕಾರಣಳು
ತವರಿನ ಹೆಸರು ಉಳಿಸಿದವಳು ಅಮ್ಮ

ಸೋಲಲ್ಲೂ ಗೆಲುವಲ್ಲೂ ಜೊತೆಗಿದ್ದವಳು
ಪತಿ ಪುತ್ರರ ಬೈಗುಳವ ಸಹಿಸಿದಳು
ಸದಾ ನಮ್ಮ ಶ್ರೇಯಸ್ಸನ್ನು ಬಯಸುವವಳು ಅಮ್ಮ